Tuesday, 31 January 2012

ನೆನಪು

           ನನ್ನ ಹಾಸ್ಟೆಲಿನ ದಿನಗಳು ನೆನಪಾಗುತ್ತಿವೆ. ಏಳು ವರ್ಷಗಳ ಕೆಳಗೆ ಪದವಿಗಾಗಿ ಓದಲು ಹಾಸ್ಟೆಲಿಗೆ ಸೇರಿಕೊಂಡದ್ದು. ಬೆಂಗಳೂರಿಗೆ ಬಂದುಬಿಡಬೇಕೆಂಬ ಒತ್ತಡವಿತ್ತು. ಅಂದಿನಿದಲೇ ರಾಶಿ-ರಾಶಿ ನೆನಪುಗಳು ಜೋಡಣೆಯಾಗುತ್ತಾ  ಹೋದದ್ದು. ಈ ಏಳು  ವರ್ಷಗಳು  ರೆಪ್ಪೆ ಮುಚ್ಚಿ ತೆರೆದಷ್ಟು ವೇಗವಾಗಿ ಮಾಯವಾಗಿವೆ. ಅದರಲ್ಲೂ ಹಾಸ್ಟೆಲಿನಲ್ಲಿದ್ದ ಮೂರು ವರ್ಷಗಳು ಹೋದದ್ದೇ ತಿಳಿಯಲಿಲ್ಲ. ಜೀವನದಲ್ಲಿ ಒಮ್ಮೆಯಾದರು  ಅಂತಹ ಅನುಭವವನ್ನು ನಮ್ಮದಾಗಿಸಿಕೊಳ್ಳಬೇಕು.
          ನನ್ನ ದಿನಚರಿ ಪ್ರಾರಂಭವಾಗುತ್ತಿದ್ದುದೇ  ಬೆಳಗ್ಗೆ ಏಳು  ಗಂಟೆಗೆ. ಅಷ್ಟರಲ್ಲಾಗಲೇ ಕೆಲವರು ಕಾಲೇಜಿನಲ್ಲಿರುತ್ತಿದ್ದರು !!
ನಾನು  ಎದ್ದವನೇ ಮುಖಕ್ಕೆ ನೀರು ತೋರಿಸಿ ರೂಮಿನೆದುರಿನ ಗೋಡೆಯ ಮೇಲೆ ಕೂತು ಮೃದುವಾಗಿ ಚುರುಗುಟ್ಟುವ ಸೂರ್ಯನನ್ನು ನೋಡುತ್ತಾ  ದೊಡ್ಡ ಲೋಟದಷ್ಟು ಕಾಫಿಯನ್ನು ಗುಟುಕರಿಸಿದರೆ.... ಅಂದಿನ ದಿನವೆಲ್ಲಾ ಬಣ್ಣ ಬಳಿದುಕೊಂಡುಬಿಡುತ್ತಿತ್ತು.
         ನಾನು ಅಲ್ಲಿ ಪಡೆದ ಜೀವನಾನುಭವ ನನ್ನ ಜೀವನದ ಪ್ರತಿ ಹೆಜ್ಜೆಯನ್ನೂ ನಿರ್ದೆಶಿಸುತ್ತಿದೆ. ಅಲ್ಲಿ ನಾ ಕಂಡಂತಹ ವಿಚಿತ್ರ ವ್ಯಕ್ತಿತ್ವಗಳನ್ನು ಮತ್ತೆಲ್ಲಿಯೂ ಕಂಡಿಲ್ಲವೆಂದರೆ ನಂಬಲೇಬೇಕು. ಆ ನೆನಪುಗಳೆಲ್ಲ ಒಟ್ಟಿಗೇ ಒತ್ತರಿಸಿ ಬಂದಾಗ ಲಕ್ಷ್ಮಣರಾಯರ   
"ಈಗೇಕೆ ಆ ನೆನಪು " ಕವಿತೆಯ ಸಾಲು ಕಿವಿಯಲ್ಲಿ ಅನುರಣಿಸುತ್ತದೆ. ಅಶ್ವಥ್ ರವರು ಸೊಗಸಾದ ಸಂಗೀತ ಕೊಟ್ಟು ಹಾಡಿದ್ದಾರೆ.  ಕೇಳಿರದಿದ್ದರೆ ಒಮ್ಮೆ ಕೇಳಿ. 

Wednesday, 4 January 2012

ಪುಟ್ಕಥೆ


ಪುಟ್ಕಥೆ
   ಒಂದೊಮ್ಮೆ ಪ್ರಪಂಚವೆಲ್ಲ ಮುಳುಗಿಬಿಟ್ಟರೆ ...?? ಏನಾಗಬಹುದು ....??? ಹಾಗೆ ಯೋಚಿಸುತ್ತಾ ನಡೆಯುತ್ತಿದ್ದಾಗ ಎದುರಿಗೆ ನನ್ನ ಗೆಳೆಯ ನಡೆದು ಬರುತ್ತಿದ್ದ. ಅವನೊಂದಿಗೆ ಒಂದಿಷ್ಟು ಮಾತಾಡಿದಮೇಲೆ ಇಬ್ಬರು ಕಾಫಿ ಕುಡಿಯೋಣವೆಂದು ಪಕ್ಕದ ಹೋಟೆಲಿನೊಳಕ್ಕೆ ನುಗ್ಗಿದೆವು. 
           ಅಲ್ಲಿ ಇಂತಹದ್ದೊಂದು ಆಶ್ಚರ್ಯವನ್ನು ನೋಡುತ್ತೆವೆಂದು ನಿರೀಕ್ಷಿಸಿರಲಿಲ್ಲ. ಐದಾರು ಜನ ಒಬ್ಬನನ್ನು ನೆಲದಮೇಲೆ ಮುಖ ಕೆಳಗೆ ಮಾಡಿ ಒತ್ತಿ ಹಿಡಿದುಕೊಂಡಿದ್ದರು.ನಾನೊಬ್ಬನೇ ಇದ್ದಿದ್ದರೇ ಹೊರಬಂದು ಇನ್ನೊಂದು ಹೋಟೆಲಿಗೆ ಹೋಗಿಬಿಡುತ್ತಿದ್ದೆ. ನನಗೆ ಕಾಫಿಯೇ ಮುಖ್ಯ ...!!! ಆದರೆ ನನ್ನ ಗೆಳೆಯ ಇದ್ದದರಿಂದ ಕುತೂಹಲ ತೋರಿಸುತ್ತ ಅಲ್ಲೇ ನಿಂತೆ.
           ಸ್ವಲ್ಪ ಹೊತ್ತಾದ ನಂತರ ಅವನು ಶಾಂತವಾದನೆಂದು ಕಾಣುತ್ತದೆ, ಹಿಡಿದಿದ್ದವರು ಸ್ವಲ್ಪ ಸ್ವಲ್ಪವೇ ಸಡಿಲಬಿಟ್ಟರು. ಅವನು ಹಾಗೆಯೇ ಅರ್ಧ ನಿಮಿಷ ಇದ್ದು ನಂತರ ಇದ್ದಕ್ಕಿದ್ದಂತೆ ಛಂಗನೆ ನೆಗೆದು ಮೇಲೆದ್ದನು. ಎದ್ದವನೇ ವಿಚಿತ್ರವಾಗಿ ಕುಣಿಯಲಾರಂಭಿಸಿದ. ನನಗೇಕೋ ಸ್ವಲ್ಪ ಭಯವಾಯಿತು.
           ಅವನ ಕಣ್ಣುಗಳು ಬಾತುಕೊಂಡು ಕೆಂಪಾಗಿದ್ದವು. ದಪ್ಪವಾದ ಮೂಗಿನ ಕೆಳಗೆ ಭಯಂಕರವಾದ ಮೀಸೆ. ಉಡುಪು ಸಾಧಾರಣವಾಗಿತ್ತು. ಕಾಲುಗಳು ಅತ್ತಲಿಂದಿತ್ತ  ಇತ್ತಲಿಂದತ್ತ ಯಾವುದೇ ತಾಳವಿಲ್ಲದೆ ಕುಣಿಯುತ್ತಿದ್ದವು. ಕೈಗಳು ಅದೇನನ್ನೋ ಹಿಡಿದಿರುವಂತೆ ನಟಿಸುತ್ತ ಒಬ್ಬೊಬ್ಬರ ಕಡೆಗೇ ಬೆರಳು ತೋರಿಸುತ್ತಿದ್ದವು.  ಹಿಂದಿನಿಂದ ಕೆಲವರು ಹೋ....!!! ಗಾಳಿ... ಗಾಳಿ...!!! ಎಂದು ಚೀರಿದರು.
           ಗುಂಪಿನ ಮಧ್ಯದಿಂದ ಒಬ್ಬ ಕೈಯಲ್ಲಿ ಒಂದು ಲೋಟ ಹಿಡಿದು ಮುಂದೆ ಬಂದವನೇ ಕುಣಿಯುತ್ತಿದ್ದವನ ಮುಖಕ್ಕೆ ನೀರೆರಚಿದ. ಕುಣಿಯುತ್ತಿದ್ದವನು ಅವನಕಡೆಗೊಮ್ಮೆ ಕ್ರೂರವಾಗಿ ನೋಡಿ ಕುಣಿತವನ್ನು ಮುಂದುವರೆಸಿದ. ಮತ್ತೊಮ್ಮೆ ಅಲ್ಲಿ ನೋಡಿದಾಗ ಅವನು ಮಾಯವಾಗಿದ್ದ...!!!
           ನನ್ನ ಗೆಳೆಯ ಸುಮ್ಮನಿರಲಾರದೆ ಕುಣಿಯುತ್ತಿದ್ದವನ ಕೈ ಹಿಡಿಯ ಹೋದ. ನಾನು ಬೇಡವೆನ್ನುವಷ್ಟರಲ್ಲೇ ಅವನು ಹೋಗಿ ಅವನ ಎಡಗೈಯನ್ನು ಅಲುಗಾಡಿಸಲಾಗದಂತೆ ಹಿಡಿದ. ಇವನನ್ನು ಕಂಡ ಕೂಡಲೇ ಅವನ ಮುಖ ರೌದ್ರವಾಯಿತು. ಯಾರತ್ತಲೋ ಬೆರಳು ಮಾಡಿದ್ದ ಅವನ ಬಲಗೈ ಕ್ಷಣಾರ್ಧದಲ್ಲಿ ರಭಸದಿಂದ ಇವನ ಮುಖದಮೇಲೆರಗಿತು...!! ಅವನು ಕೈಯನ್ನು ಬಿಡಿಸಿಕೊಂಡವನೇ ಇವನ ಕೈಯನ್ನು ತಿರುವಿ ಹಿಂದಕ್ಕೆ ಮಡಚಿದ. ಕಡೆಗೆ ಇಬ್ಬರೂ ಕಷ್ಟಪಟ್ಟು ಕೈಯನ್ನು ಬಿಡಿಸಿ ಅಲ್ಲಿನದ ಓಟ ಕಿತ್ತೆವು.
              ಇವನಿಗೆ ಮೆಲ್ಲಗೆ ಗಲ್ಲದಮೇಲೆ ಕಡು ನೀಲಿಯಾ ಬಾವು ಬರುತ್ತಿತ್ತು. ಹಿಂದೆ ನೋಡಿದೆವು, ಕುಣಿಯುತ್ತಿದ್ದ್ದವನ ಸುತ್ತಲೂ ಗುಂಪು ಬೆಳೆಯುತ್ತಿತ್ತು. ನಾವಿನ್ನು ಅರ್ಧ ಫರ್ಲಾಂಗು ಮುಂದೆ ಹೋಗಿರಬಹುದು, ಹುಚ್ಚಾಸ್ಪತ್ರೆಯ ಗಾಡಿ ನಮ್ಮ ಮುಂದೆ ಹಾದು ಹೋಯಿತು.